ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಸವಿ ನೆನಪು


ಪುನೀತ್ ರಾಜಕುಮಾರ್ ಈ ಹೆಸರೇ ಹಲವರಿಗೆ ಸ್ಪೂರ್ತಿ, ಜೀವನದ  ದಾರಿದೀಪ, ಬದುಕಿನ ಆಶಾಕಿರಣ, ಅಭಿಮಾನಿಗಳ  ಆರಾಧ್ಯ ದೈವ ಹೀಗೆ ಹಲವು ವಿಧಗಳಲ್ಲಿ ವರ್ಣಿಸಬಹುದು. ನೊಂದವರ ಕಣ್ಣೀರ ಒರೆಸಿದ ನಗುವಿನ ಸಾಹುಕಾರನಿಗೆ ಇಂದು 49ನೇ ಹುಟ್ಟುಹಬ್ಬ. ಅವರು ನಮ್ಮೊಂದಿಗೆ ದೈಹಿಕವಾಗಿ ಇರದಿದ್ದರೂ ಮಾನಸಿಕವಾಗಿ ಎಂದಿಗೂ ನಮ್ಮ ಜೊತೆ ಇರುತ್ತಾರೆ ಎಂಬ ನಂಬಿಕೆಯ ಮೇಲೆ ಈ ಲೇಖನವನ್ನು ಬರೆಯುತ್ತಿದ್ದೇನೆ.

ಇತ್ತೀಚೆಗೆ ನಮ್ಮ ಊರಿನಲ್ಲಿ ಸಂಬಂಧಿಕರ ಮನೆಗೆ ಹೋದಾಗ ಟಿವಿಯಲ್ಲಿ ಪುನೀತ್ ರವರ ಹಾಡು ಬರುತ್ತಿತ್ತು. ಅಲ್ಲೇ ಟಿವಿ ನೋಡುತ್ತಾ ಕುಳಿತಿದ್ದ ಅಜ್ಜಿ ನನಗೆ ಒಂದು ಮಾತು ಹೇಳಿತು ” ಮಗಾ, ಇಂತಹ  ವ್ಯಕ್ತಿ ಮತ್ ಹುಟ್ಟೋದಿಲ್ಲ , ಪುನೀತ್ ತೀರಿಕೊಂಡಾಗ ನಾನು ಟಿವಿ ನೋಡ್ತಾ  ಅಳ್ತಾ ಕೂತಿದ್ದೆ, ನಾ ಅಳೋದನ್ನ ನೋಡಿ ನನ್ನ ಮೊಮ್ಮಗ ಬಂದು ಪುನೀತ್ ಇಲ್ಲ ಅಂತ ಬೇಜಾರ್ ಮಾಡ್ಕೋಬೇಡ ಅಜ್ಜಿ , ನಾನಿದ್ದೀನಿ, ನನ್ನೇ ಪುನೀತ್ ಅನ್ಕೊ ಅಂತ ಹೇಳಿದ. ಇಂದಿಗೂ ಈ ಪುಟ್ಟ ಮಕ್ಕಳಲ್ಲೇ ನಾನು ಪುನೀತ್ ನ ಕಾಣ್ತಿನಿ” ಎಂದು ಹೇಳುವಾಗ ನನಗನ್ನಿಸಿದ್ದು, ಹೌದು, ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ ಎನ್ನುವುದು ಎಷ್ಟು ಸತ್ಯ. ಅವರಿದ್ದದ್ದೇ ಹಾಗೆ, ಅಪ್ಪುವಿನ ಅಪ್ಪುಗೆ, ನಿಷ್ಕಲ್ಮಶ ನಗು, ಎಲ್ಲರೂ ನಮ್ಮವರೇ ಎಂಬ ಭಾವನೆ ಈ ವ್ಯಕ್ತಿತ್ವಗಳೆ ಜನರ ಮನಸ್ಸಲ್ಲಿ ಬಹಳ ಎತ್ತರದ ಸ್ಥಾನದಲ್ಲಿ ಇರುವಂತೆ ಮಾಡಿದೆ. ಅವರು ಮಾಡಿರುವ ಪುಣ್ಯ ಕೆಲಸಗಳು ತುಂಬಾ ಜನರಿಗೆ ಪ್ರೇರಣೆಯಾಗಿದೆ.

ಪ್ರತಿವರ್ಷ ಅವರ ಹುಟ್ಟುಹಬ್ಬಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಒಂದಿಲ್ಲೊಂದು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.  ಅಪ್ಪು ಅವರ ಹಾದಿಯಲ್ಲಿ ಸಾಗುತ್ತಿರುವ ಅವರ ಅಭಿಮಾನಿಗಳು ಅವರ ಹುಟ್ಟುಹಬ್ಬಕ್ಕೆ ಅನ್ನದಾನ, ರಕ್ತದಾನ, ನೇತ್ರದಾನ, ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ಹಣ್ಣು ಹಂಪಲು ವಿತರಣೆ  ಸೇರಿ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.

ಪುನೀತ್ ರವರು ತಮ್ಮ ಸಿನಿ ಜೀವನದಲ್ಲಿ ಅತ್ಯುತ್ತಮ ಚಿತ್ರಗಳನ್ನು ಕೊಟ್ಟಿದ್ದಾರೆ. ಅವರ ಎಲ್ಲಾ ಚಿತ್ರಗಳು ಕುಟುಂಬ ಸಮೇತ ನೋಡುವಂತಹ ಚಿತ್ರಗಳಾಗಿವೆ ಮತ್ತು ಆ ಮೂಲಕ ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ. ಪುನೀತ್ ರವರ ಆದರ್ಶಗಳನ್ನು ಹಾಗೂ ಅವರು ಮಾಡಿರುವ ಒಳ್ಳೆಯ ಕೆಲಸಗಳನ್ನು ನೆನಪಿಸಿಕೊಳ್ಳುತ್ತಾ, ಅವರ ಪ್ರತೀ  ಹುಟ್ಟುಹಬ್ಬದಂದು  ಸಮಾಜಕ್ಕೆ ನಮ್ಮ ಕೈಲಾದ ಸೇವೆಯನ್ನು ಮಾಡುತ್ತಾ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸೋಣ . ಪುನೀತ್ ರವರು ಮತ್ತೆ ಕರುನಾಡಲ್ಲಿ ಹುಟ್ಟಿ ಬರಲಿ ಎಂದು ಪ್ರಾರ್ಥಿಸೋಣ. 49ನೇ ಹುಟ್ಟುಹಬ್ಬದ ಶುಭಾಶಯಗಳು ಅಪ್ಪು. ರಾಜಕುಮಾರ ಎಂದಿಗೂ ಅಜರಾಮರ.

ನಿಮ್ಮ ಅಭಿಮಾನಿ,
ವಿನಯ್ ಹೆಚ್ ಟಿ

Leave a comment