‘ಕೆರೆಬೇಟೆ ‘ ಇದೊಂದು ಮಲೆನಾಡಿನ ಗ್ರಾಮೀಣ ಕ್ರೀಡೆ. ಇದೇ ಹೆಸರಿನ ಮೂಲಕ ಮಲೆನಾಡಿನ ಗ್ರಾಮೀಣ ಸೊಗಡಿನ ಕಥೆಯನ್ನು ಹೇಳಲು ಮಾರ್ಚ್ 15ರಂದು ‘ಕೆರೆಬೇಟೆ’ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.
ಟ್ರೈಲರ್ ನಲ್ಲೆ ಭಾರಿ ನಿರೀಕ್ಷೆ ಹುಟ್ಟಿಸಿದ ‘ಕೆರೆಬೇಟೆ’:-
‘ಕೆರೆಬೇಟೆ’ ಚಿತ್ರದ ಟ್ರೈಲರ್ ಈಗಾಗಲೇ ರಿಲೀಸ್ ಆಗಿದ್ದು ಲಕ್ಷಗಟ್ಟಲೆ ವ್ಯೂಸ್ ಗಳನ್ನು ಪಡೆದು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಟ್ರೈಲರ್ ನಲ್ಲಿ ತೋರಿಸಿದಂತೆ ಮಲೆನಾಡಿನ ತಾಣಗಳನ್ನು ಸುಂದರವಾಗಿ ಚಿತ್ರಿಸಲಾಗಿದೆ, ಅಲ್ಲಿಯ ಜನರ ದಿನನಿತ್ಯದ ಜೀವನ, ಮಲೆನಾಡ ಭಾಷೆಯನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಪ್ರತಿ ದೃಶ್ಯವೂ ಹೊಸತನದಿಂದ ಕೂಡಿದ್ದು ನೋಡುಗರಿಗೆ ವಿಭಿನ್ನವಾದ ಅನುಭವವನ್ನು ಕೊಡಲಿದೆ.
ಇತ್ತೀಚಿನ ದಿನಗಳಲ್ಲಿ ನೆಲಮೂಲದ ಕಥೆಗಳಿಗೆ ಮನ್ನಣೆ:-
‘ಕಾಂತಾರ’ ಚಿತ್ರದ ಯಶಸ್ಸಿನ ನಂತರ ನೆಲ ಮೂಲದ ಕಥೆಗಳಿಗೆ ಹೆಚ್ಚಿನ ಮನ್ನಣೆ ದೊರಕಿದೆ. ಕರ್ನಾಟಕ ವೈವಿಧ್ಯತೆಯ ನಾಡು, ಇಲ್ಲಿ ತನ್ನದೇ ಆದ ಹಲವಾರು ಜಾನಪದ ಕ್ರೀಡೆಗಳು, ಸಾಹಿತ್ಯ, ಸಂಗೀತ, ಕಲೆಗಳನ್ನು ಹೊಂದಿದೆ. ಹಲವಾರು ಸಂಸ್ಕೃತಿ ಮತ್ತು ಸಂಪ್ರದಾಯಗಳ ತವರೂರು ಕರ್ನಾಟಕವಾದರೂ ನಮ್ಮ ಜನರಿಗೆ ಅವುಗಳ ಬಗ್ಗೆ ಇರುವ ಮಾಹಿತಿ ಕಡಿಮೆ. ‘ಕೆರೆಬೇಟೆ’ಯಂತಹ ಚಿತ್ರಗಳು ಅದ್ಭುತ ಚಿತ್ರಕಥೆಯ ಮೂಲಕ ನಮ್ಮ ನೆಲಮೂಲದ ಆಚರಣೆಗಳು ಹಾಗೂ ಸಂಪ್ರದಾಯಗಳ ಬಗ್ಗೆ ಅರಿವನ್ನು ಮೂಡಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಒಂದೇ ತರನಾದ ಸಿನಿಮಾಗಳನ್ನು ನೋಡುತ್ತಿದ್ದ ಪ್ರೇಕ್ಷಕರಿಗೆ ಇಂತಹ ಪ್ರಯೋಗಾತ್ಮಕ ಚಿತ್ರಗಳು ಉತ್ತಮ ಮಾಹಿತಿಯ ಜೊತೆಗೆ ಮನರಂಜನೆಯನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಚಿತ್ರದ ಎರಡು ಹಾಡುಗಳು ರಿಲೀಸ್ ಆಗಿದ್ದು, ‘ಮಲೆನಾಡಗೊಂಬೆ’ ಹಾಡನ್ನು ಉಪೇಂದ್ರರವರು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಇತ್ತೀಚೆಗೆ ಅಶ್ವಿನಿ ಪುನೀತ್ ರಾಜಕುಮಾರ್ ರವರು ಕೆರೆ ಬೇಟೆ ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ಬಿಡುಗಡೆ ಮಾಡಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಚಿತ್ರದ ನಾಯಕನಾಗಿ ‘ಜೋಕಾಲಿ’ ‘ರಾಜಹಂಸ’ ಖ್ಯಾತಿಯ ಗೌರಿಶಂಕರ್ ನಟಿಸಿದ್ದು, ಬಿಂದು ಶಿವರಾಂ ನಾಯಕಿಯಾಗಿದ್ದಾರೆ. ಗೋಪಾಲಕೃಷ್ಣ ದೇಶ್ಪಾಂಡೆ, ಸಂಪತ್ ಮೈತ್ರೆಯ, ರಾಜು ವೈವಿಧ್ಯ ಹರಿಣಿ ಶ್ರೀಕಾಂತ್, ಚಿಲ್ಲರ್ ಮಂಜು, ರಾಕೇಶ್ ಪೂಜಾರಿ, ವರ್ಧನ್ ತೀರ್ಥಹಳ್ಳಿ ಸೇರಿದಂತೆ ಮುಂತಾದ ಸ್ಥಳೀಯ ಕಲಾವಿದರು ನಟಿಸಿದ್ದಾರೆ.
ರಾಜಗುರು ಬಿ ನಿರ್ದೇಶನದ ‘ಕೆರೆಬೇಟೆ’ ಚಿತ್ರದಲ್ಲಿ ಗಗನ್ ಬಡೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೀರ್ತನ್ ಪೂಜಾರಿ ಛಾಯಾಗ್ರಹಣ ಇರುವ ಈ ಚಿತ್ರಕ್ಕೆ ಜ್ಞಾನೇಶ್ ಬಿ ಮಠದ್ ರವರ ಸಂಕಲನವಿದೆ. ಚಿತ್ರಕಥೆಯನ್ನು ರಾಜಗುರು ಬಿ ಹಾಗೂ ಗೌರಿಶಂಕರ್ ಮಾಡಿದ್ದು, ಸಂಭಾಷಣೆಯನ್ನು ಗೌರಿಶಂಕರ್ ರವರು ಬರೆದಿದ್ದಾರೆ
ಜನಮನ ಸಿನೆಮಾಸ್ ಬ್ಯಾನರ್ ನಡಿಯಲ್ಲಿ ಜೈ ಶಂಕರ್ ಪಟೇಲ್ ನಿರ್ಮಾಣದ ‘ಕೆರೆಬೇಟೆ’ ಚಿತ್ರವು ಇದೇ ಮಾರ್ಚ್ 15ರಂದು ಬಿಡುಗಡೆಯಾಗಲಿದ್ದು ಹೊಸ ಪ್ರಯತ್ನಕ್ಕೆ ಪ್ರೇಕ್ಷಕರ ಪ್ರೋತ್ಸಾಹ ಅಗತ್ಯವಿದೆ. ಸಿನಿಮಾ ಸಂಚಾರ ತಂಡ ‘ಕೆರೆಬೇಟೆ’ ಚಿತ್ರಕ್ಕೆ ಶುಭ ಹಾರೈಸುತ್ತದೆ.