ಉದಯೋನ್ಮುಖ  ನಿರ್ದೇಶಕ – ಗುರು ಆರ್ಯ

ಹುಟ್ಟಿದ್ದು – ಬೆಂಗಳೂರಿನ ಬೊಮ್ಮನಹಳ್ಳಿಯ ವಿರಾಟ್ ನಗರ. ತಂದೆ ಲಾರಿ ಡ್ರೈವರ್, ತಾಯಿ ಹೌಸ್ ವೈಫ್, ಸೆಂಟ್ ಜೋಸೆಫ್ ಸ್ಕೂಲ್ ನಲ್ಲಿ 10ನೇ ತರಗತಿವರೆಗೂ ಓದಿ, ತಮ್ಮ ಬಾಲ್ಯದ ದಿನಗಳನ್ನು ವಿರಾಟ್ ನಗರದಲ್ಲಿ ಕಳೆಯುತ್ತಾರೆ. ಹೈ ಸ್ಕೂಲ್ ನಲ್ಲಿರುವಾಗ ಸಿಪಾಯಿ ಸಿನಿಮಾ ನೋಡುತ್ತಾ  ರವಿಚಂದ್ರನ್ ಸರ್ ಅವರ ಅಭಿನಯಕ್ಕೆ ಅಭಿಮಾನಿಯಾಗಿ,  ಸಿನಿಮಾದಲ್ಲಿ ಸ್ನೇಹಕ್ಕೆ ಕೊಡುವ ಬೆಲೆ, ಪ್ರೀತಿಗೆ ಕೊಡುವ ಗೌರವ ಗುರು ಮನಸ್ಸಿನಲ್ಲಿ ಉಳಿದು,  ಬಣ್ಣದ ಲೋಕದ ಆಸೆ ಚಿಗುರೊಡೆಯುತ್ತೆ, ಗುರುಗೆ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕು ಎನ್ನುವಷ್ಟು ಛಲ ಹುಟ್ಟುತ್ತೆ. ಆದ್ರೆ ಏನ್ ಮಾಡ್ಬೇಕು? ಯಾವುದನ್ನ ಮಾಡ್ಬೇಕು? ಎಲ್ಲವೂ ಮನಸ್ಸಿನಲ್ಲಿ ಪ್ರಶ್ನೆ? 10ನೇ ತರಗತಿ ಮುಗಿಯುತ್ತಿದ್ದ ಹಾಗೇ, ಅನಿವಾರ್ಯ ಕಾರಣಗಳಿಂದಾಗಿ ತಂದೆಯ ಕೆಲಸದ ನಿಮಿತ್ತ ಗುರು ಅವರ ಫ್ಯಾಮಿಲಿ ಮೈಸೂರಿಗೆ ಶಿಫ್ಟ್ ಆಗುತ್ತಾರೆ.

ಮೈಸೂರಿನ ಸೆಂಟ್ ಫಿಲೋಮೀನಸ್ ಕಾಲೇಜಿನಲ್ಲಿ ಓದುತ್ತಿರುವಾಗ ಪ್ರೊಫೆಸರ್ ಕೃಷ್ಣೆ ಗೌಡ ಅವರ ಪರಿಚಯವಾಗತ್ತೆ, ಪ್ರೊಫೆಸರ್ ಕೃಷ್ಣೆ ಗೌಡ ಅವರು ( ಸ್ಟ್ಯಾಂಡಪ್ ಕಾಮಿಡಿಯನ್ ) ಸೆಂಟ್ ಫಿಲೋಮೀನಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುತ್ತಾರೆ. ಗುರು ತನ್ನ ಮನಸ್ಸಿನ ಆಸೆಯನ್ನು ಡಿಗ್ರಿ ಮುಗಿಯುವ ಸಮಯದಲ್ಲಿ ಹೇಳಿಕೊಂಡಾಗ ‘ರಂಗಭೂಮಿಯಲ್ಲಿ ಮೊದಲು ಕೆಲಸ ಮಾಡಿ ಅನುಭವವನ್ನ ಪಡ್ಕೋ  ನಿನಗೆ ಎಲ್ಲವೂ ತಾನಾಗಿಯೇ ದಾರಿ ಸಿಗುತ್ತದೆ’ ಎಂದು ಕೃಷ್ಣೆಗೌಡರು ಸಲಹೆ ನೀಡುತ್ತಾರೆ.

ಅದೇ ಸಮಯದಲ್ಲಿ ಗುರು ಸ್ನೇಹಿತ ಒಂದು ಶಾರ್ಟ್ ಫಿಲಂ ಗಾಗಿ ಕಲಾವಿದರು ಹುಡುಕುತ್ತಿರುವಾಗ ‘ನಟನ ಅಭಿನಯ ಶಾಲೆ’ ಪರಿಚಯವಾಗುತ್ತೆ. ನಟನದಲ್ಲಿ ಸೇರಲು  ಫೀಸ್ ಕೊಡಬೇಕಾಗಿಲ್ಲ, ಶಿಸ್ತಾಗಿ  ನಾಟಕದ ರೆಹರ್ಸಲ್ ಹಾಗೂ ನಾಟಕದ ಶೋಗಳಿಗೆ ಯಾವುದೇ ಕಾರಣಕ್ಕೂ ತಪ್ಪಿಸದೆ ಬಂದರೆ ಮಾತ್ರ ಅವಕಾಶ ಸಿಗುತ್ತದೆ ಎಂದು ಹೇಳುತ್ತಾರೆ. ಅವತ್ತಿಂದನೇ ಗುರು ರಂಗಭೂಮಿಯಲ್ಲಿ ಕೆಲಸ ಮಾಡಲು ಶುರು ಮಾಡುತ್ತಾರೆ. ನಿರಂತರವಾಗಿ ಎಲ್ಲಾ ರೀತಿಯ ಕೆಲಸಗಳಲ್ಲಿ ತನ್ನನ್ನ ತಾನು ತೊಡಗಿಸಿಕೊಳ್ಳುವ ಮೂಲಕ ಕೆಲಸವನ್ನು ಕಲಿಯುತ್ತಾ, ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಸಮಯ ಕಳೆಯುತ್ತಾ ಹೋದ ಹಾಗೇ ಮುಖ್ಯ ಪಾತ್ರಗಳಲ್ಲಿಯೂ ನಾಟಕದಲ್ಲಿ ಅಭಿನಯಿಸುತ್ತಾರೆ.  ನಟನದಲ್ಲಿ ಮಂಡ್ಯ ರಮೇಶ್ ಅವರ ಗರಡಿಯಲ್ಲಿ 4ವರ್ಷ ಪಳಗಿ ನಾಟಕದಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುವಾಗ ನಾಟಕದಲ್ಲಿನ ಅಭಿನಯ ನೋಡಿ,  ಪ್ರಕಾಶ್ ರೈ ಅವರ ಸಿನಿಮಾ ‘ಇದೊಳ್ಳೆ ರಾಮಾಯಣ’ ಸಿನಿಮಾದಲ್ಲಿ ಒಂದು ಪುಟ್ಟ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಗುತ್ತದೆ.

ರಂಗಭೂಮಿಯಲ್ಲಿ ಕೆಲಸ ಮಾಡುತ್ತಾ ಸಿನಿಮಾ ನಿರ್ದೇಶನದ ಬಗ್ಗೆ ಒಲವು ಜಾಸ್ತಿ ಇದ್ದಿದ್ದರಿಂದ ಸ್ನೇಹಿತರ ಸಲಹೆ ಹಾಗೂ ಪರಿಚಯದಿಂದ ನಿರ್ದೇಶಕ ಜಯತೀರ್ಥ ಅವರ ಜೊತೆ ಸಹಾಯಕ ನಿರ್ದೇಶನಾಗಿ  ‘ವೆನಿಲಾ’ ಸಿನಿಮಾದಲ್ಲಿ  ಕೆಲಸ ಸಿಗುತ್ತದೆ. ಏನು ಗೊತ್ತಿಲ್ಲದೇ ಇರುವಾಗ ಜೊತೆಗೆ ಇದ್ದಂಥ ಸಹ ನಿರ್ದೇಶಕರು ಕೆಲಸವನ್ನು ಹೇಳಿಕೊಡುತ್ತಾರೆ. ಇದಾದ ನಂತರ ಸ್ನೇಹಿತ ನಿಂಗರಾಜು ಮಂಡ್ಯ ಸಹಾಯದಿಂದ ‘ವಿದ್ಯಾ-ವಿನಾಯಕ’ ಸೀರಿಯಲ್ ನಲ್ಲಿ  ಅಸಿಸ್ಟೆಂಟ್ ಡೈರೆಕ್ಟರ್ ಕೆಲಸ ಸಿಗುತ್ತದೆ.

ರಂಗಭೂಮಿಯಲ್ಲಿ ಕೆಲಸ ಮಾಡುವಾಗ ಬಿ. ಸುರೇಶ್ ಅವರು ‘ಮೃತ್ಯುಂಜಯ’ ಎಂಬ ನಾಟಕವನ್ನು ‘ನಟನ’ದಲ್ಲಿ ನಿರ್ದೇಶನ ಮಾಡಿದ್ದರು ಅವಾಗ ಆ ನಾಟಕದಲ್ಲಿ ಒಂದು ಪಾತ್ರ ಮಾಡಿದ್ದೆ, ಬೆಂಗಳೂರಿನಲ್ಲಿ ಸೀರಿಯಲ್ ಶೂಟಿಂಗ್ ಸಮಯದಲ್ಲಿ ಬಿ. ಸುರೇಶ್ ಅವರು ಸಿಕ್ಕಿ ‘ಯಜಮಾನ’ ಸಿನಿಮಾ ನಿರ್ಮಾಣ ಮಾಡುತ್ತಿದ್ದನೇ ಆ ಸಿನಿಮಾದಲ್ಲಿ ಬಂದು ಕೆಲಸ ಮಾಡು ಎಂದು ಹೇಳಿದರು ಕನಸು ಮನಸಿನಲ್ಲೂ ದರ್ಶನ ಸರ್ ಹಾಗೂ ಹರಿ ಕೃಷ್ಣ ಸರ್ ಜೊತೆ ಕೆಲಸ ಮಾಡ್ತೀನಾ ಎಂದು ಅಂದುಕೊಂಡಿರಲಿಲ್ಲ ದೇವರು ಒಂದು ಅವಕಾಶ ಕೊಟ್ಟಿದ್ದಾನೆ ಬಿಡಬಾರದು ಎಂದು ‘ಯಜಮಾನ’ ಸಿನಿಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸಕ್ಕೆ ಸೇರಿಕೊಂಡೆ ಅದು ನನ್ನ ಬದುಕಿನ ಅಮೋಘ ದಿನಗಳು ಅಷ್ಟು ದೊಡ್ಡ ಕಲಾವಿದರು, ಟೆಕ್ನಿಷಿಯನ್ಸ್  ಜೊತೆ ಕೆಲಸ ಮಾಡಲು ನನಗೆ ಸಿಕ್ಕ ಸೌಭಾಗ್ಯ. ಈ ಸಿನಿಮಾ ನಂತರ ಜಯತೀರ್ಥ ಸರ್ ಅವರು ‘ಬನಾರಸ್’ ಸಿನಿಮಾ ಮಾಡುತ್ತಿದ್ದರು ಮತ್ತೆ ಅವರ ಜೊತೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದೆ.

ಇಷ್ಟು ವರ್ಷದ ಅನುಭವದಲ್ಲಿ ನಾನು ಒಬ್ಬ ನಿರ್ದೇಶಕನಾಗಬೇಕು ಎಂಬ ಬಯಕೆಯಿಂದ ಬಹಳ ದಿನಗಳಿಂದ ಕಾಡುತಿದ್ದ ಒಂದು ಕಥೆಯನ್ನು ಕಿರು ಚಿತ್ರ ಮಾಡಲು ಮುಂದಾದೆ ಅದಕ್ಕೆ ಬಹಳಷ್ಟು ಸ್ನೇಹಿತರು ಸಹಕರಿಸಿದರು, ಬಾಬು ಹಿರಣ್ಣಯ್ಯ, ಸೀತಾ ಕೋಟೆ, ರಕ್ಷಿತ್, ರಾಗ ಅರಸ್, ಛಾಯಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.  ಈ ಕಿರು ಚಿತ್ರವನ್ನು ಸತ್ಯ ಹೆಗ್ಡೆ ಸ್ಟುಡಿಯೋಸ್ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದೇವೆ. ಕಿರು ಚಿತ್ರವನ್ನು ನೋಡಿದ ಬಹಳಷ್ಟು ಜನರು ತುಂಬಾ ಒಳ್ಳೆಯ ಅಭಿಪ್ರಾಯವನ್ನು ಹೇಳುತ್ತಿದ್ದಾರೆ. ಈ ಒಂದು ಚಿಕ್ಕ ಪ್ರಯತ್ನಕ್ಕೆ ಸಿಕ್ಕ ಹೊಗಳಿಕೆ, ಪ್ರೀತಿ ನನ್ನ ಮುಂದಿನ ಕೆಲಸಕ್ಕೆ ಇನ್ನಷ್ಟು ಸ್ಫೂರ್ತಿಯಾಗಿದೆ ಎಂದು ನಮ್ಮ ಸಿನಿಮಾ ಸಂಚಾರದ ಜೊತೆ ಮಾತನಾಡಿದರು. ಗುರು ಆರ್ಯ ಅವರ ಒಬ್ಬ ಉತ್ತಮ ನಿರ್ದೇಶಕರಾಗಲಿ ಎಂದು ಸಿನಿಮಾ ಸಂಚಾರ ಶುಭಕೋರುತ್ತೇವೆ.

Leave a comment