ಮಾರ್ಚ್ 7 ಕ್ಕೆ ತೆರೆಗೆ ಬರಲಿದೆ ಜೋಗ್ 101 :- ಮತ್ತೊಂದು ಕ್ರೈಂ ಥ್ರಿಲ್ಲರ್ ನಲ್ಲಿ ವಿಜಯ ರಾಘವೇಂದ್ರ

ವಿಜಯ ರಾಘವೇಂದ್ರ ನಟನೆಯ ‘ಜೋಗ್ 101’ ಚಿತ್ರವು ಇದೇ ಮಾರ್ಚ್ 7ನೇ ತಾರೀಖಿಗೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಇತ್ತೀಚೆಗೆ ಹೊಸಬರ ಸಸ್ಪೆನ್ಸ್ ಹಾಗೂ ಕ್ರೈಮ್ ತ್ರಿಲ್ಲರ್ ಚಿತ್ರಗಳು ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದು ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿವೆ. ಈಗ ಅದೇ ಸಾಲಿಗೆ ಹೊಸ ಸೇರ್ಪಡೆ ‘ಜೋಗ 101’. ಇತ್ತೀಚೆಗೆ ‘ಕೇಸ್ ಆಫ್ ಕೊಂಡಾಣ’ ಎಂಬ ಕ್ರೈಮ್ ಥ್ರಿಲ್ಲರ್ ಚಿತ್ರದಲ್ಲಿ ವಿಜಯ ರಾಘವೇಂದ್ರ ನಟಿಸಿದ್ದರು ಹಾಗೂ ಆ ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿತ್ತು. ಈಗ ಜೋಗ್ 101 ಎಂಬ ಕ್ರೈಮ್ ಥ್ರಿಲ್ಲರ್ ಮೂಲಕ ತೆರೆಗೆ ಬರುತ್ತಿದ್ದಾರೆ.

ಜೋಗ್ 101 ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಮಿಲಿಯನ್ ಗಟ್ಟಲೆ ವೀವ್ಸ್ ಗಳನ್ನು ಪಡೆದು ನೋಡುಗರ ಮೆಚ್ಚುಗೆಯನ್ನು ಗಳಿಸಿದೆ. ಟ್ರೈಲರ್ ನಲ್ಲೆ ತೋರಿಸಿರುವಂತೆ, ಜೋಗ್ ಫಾಲ್ಸ್ ಪೊಲೀಸ್ ಸ್ಟೇಷನ್ ಲಿಮಿಟ್ ನಲ್ಲಿ ಕಾಣೆಯಾದ 131 ಜನರ ಬಗ್ಗೆ ನಾಯಕ ವಿಕ್ರಂ ಹುಡುಕಾಟ ನಡೆಸುವ ಪತ್ತೇ ದಾರಿ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

ಛಾಯಾಗ್ರಾಹಕ ಸುನೀತ್ ಹಲಗೇರಿ ರವರ ಕೆಲಸವನ್ನು ಮೆಚ್ಚಲೇಬೇಕು. ಜೋಗ್ ಫಾಲ್ಸ್ ಅನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಮಲೆನಾಡಿನ ಪ್ರಕೃತಿಯ ಸೊಬಗನ್ನು ಮತ್ತು ಅಲ್ಲಿಯ ಜನರ ದಿನನಿತ್ಯದ ಜೀವನವನ್ನು ಸುಂದರವಾಗಿ ಸೆರೆಹಿಡಿದಿದ್ದಾರೆ. ಪ್ರತಿ ದೃಶ್ಯವೂ ಹೊಸತನ ಮತ್ತು ತಾಜಾತನದಿಂದ ಮೂಡಿಬಂದಿದೆ ಹಾಗೂ ಇದಕ್ಕೆ ಬ್ಯಾಗ್ರೌಂಡ್ ಮ್ಯೂಸಿಕ್ ಪುಷ್ಠಿ ನೀಡಿದೆ.

ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ತೇಜಸ್ವಿನಿ ಶೇಖರ್, ರಾಜೇಶ್ ನಟರಂಗ, ಗೋವಿಂದೇಗೌಡ, ನಿರಂಜನ್ ದೇಶ್ಪಾಂಡೆ, ಯಶಸ್ವಿನಿ ದೇಶ್ಪಾಂಡೆ, ತಿಲಕ್ ಶೇಖರ್, ಕಡ್ಡಿಪುಡಿ ಚಂದ್ರು ಮುಂತಾದವರು ನಟಿಸಿದ್ದಾರೆ.

ವಿಜಯ್ ಕನ್ನಡಿಗ ನಿರ್ದೇಶನದ ಈ ಚಿತ್ರದಲ್ಲಿ ಸುನೀತ್ ಹಲಗೇರಿ ಅವರ ಛಾಯಾಗ್ರಹಣವಿದ್ದು ಮೋಹನ್ ಎಲ್ ರಂಗಕಹಳೆ ರವರ ಸಂಕಲನ ಹಾಗೂ ಅವಿನಾಶ್ ಆರ್ ಬಸುತ್ಕರ್ ರವರ ಸಂಗೀತವಿದೆ.

ಪ್ರೊಡ್ಯೂಸರ್ ಮತ್ತು ಕ್ರಿಯೇಟಿವ್ ಡೈರೆಕ್ಟರ್ ರಘು ರವರ ನಿರ್ಮಾಣದ ಈ ಚಿತ್ರವು ಇದೇ ಮಾರ್ಚ್ 7, 2024 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ವಿಭಿನ್ನ ಪ್ರಯತ್ನಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.

Leave a comment