ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 56ನೇ ಬಹುನಿರೀಕ್ಷಿತ ಕಾಟೇರ ಚಿತ್ರವು ಡಿಸೆಂಬರ್ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಟಿಕೆಟ್ ಬುಕಿಂಗ್ ಶುರುವಾಗಿದ್ದು ಹಲವು ಚಿತ್ರಮಂದಿರಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಬೆಂಗಳೂರಿನ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರಗಳಲ್ಲಿ ಒಂದಾದ ಅನುಪಮಾ ಚಿತ್ರಮಂದಿರದಲ್ಲಿ ಕಾಟೇರ ಚಿತ್ರವು ಬಿಡುಗಡೆಯಾಗುತ್ತಿದೆ.
ಕಾಟೇರ ಚಿತ್ರದ ಹಾಡುಗಳು ಈಗಾಗಲೇ ಯೂಟ್ಯೂಬ್ ನಲ್ಲಿ ಮಿಲಿಯನ್ ಗಟ್ಟಲೆ ವ್ಯೂಸ್‌ಗಳನ್ನು ಪಡೆದಿದ್ದು ಮ್ಯೂಸಿಕ್ ಮಾಂತ್ರಿಕ ವಿ ಹರಿಕೃಷ್ಣ ಅವರು ಸಂಗೀತ ನೀಡಿದ್ದಾರೆ. ರಾಕ್ ಲೈನ್ ವೆಂಕಟೇಶ್ ರವರ ನಿರ್ಮಾಣದ ಈ ಚಿತ್ರಕ್ಕೆ ತರುಣ್ ಸುಧೀರ್ ಅವರ ನಿರ್ದೇಶನವಿದ್ದು, ಸುಧಾಕರ್ ಎಸ್ ರಾಜ್ ರವರ ಛಾಯಾಗ್ರಹಣವಿದೆ.
ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ರಾಧನರಾಮ್ ಮೊದಲ ಬಾರಿಗೆ ನಾಯಕನಟಿಯಾಗಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದುವರೆಗೂ ಮಾಲಾಶ್ರೀ ಅವರ ನಟನೆಯನ್ನು ಬೆಳ್ಳಿತೆರೆಯಲ್ಲಿ ನೋಡಿ ಖುಷಿಪಟ್ಟಿದ್ದ ಅಭಿಮಾನಿಗಳು ಅವರ ಮಗಳಾದ ಆರಾಧನಾ ರಾಮ್ ಅವರ ನಟನೆಯನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
ಮೊನ್ನೆ ಮಂಡ್ಯದಲ್ಲಿ ನಡೆದ ಪ್ರೀರಿಲೀಸ್ ಇವೆಂಟ್ ನಲ್ಲಿ ಸಂಗೀತ ನಿರ್ದೇಶಕ ವಿ. ಹರಿಕೃಷ್ಣರವರು ಕುತೂಹಲಕಾರಿ ವಿಷಯವನ್ನು ಹೇಳಿದ್ದಾರೆ. ವೇದಿಕೆಯಲ್ಲಿ ಮಾತನಾಡಿದ ಅವರು ದರ್ಶನ್ ಅವರು ಈ ಚಿತ್ರದಲ್ಲಿ ಅತ್ಯದ್ಭುತ ನಟನೆ ಮಾಡಿದ್ದಾರೆ, ಅವರ ನಟನೆಗೆ ರಾಷ್ಟ್ರಪ್ರಶಸ್ತಿ ಸಿಗಬೇಕು ಎಂದು ಹೇಳಿದ್ದಾರೆ. ರಾಷ್ಟ್ರ ಪ್ರಶಸ್ತಿ ಕಮಿಟಿಗೆ ದರ್ಶನ್ ಅವರ ನಟನೆಯನ್ನು ಗಮನದಲ್ಲಿಟ್ಟುಕೊಳ್ಳುವಂತೆ ಹೇಳಿದ್ದಾರೆ. ಹರಿಕೃಷ್ಣ ಅವರ ಈ ಮಾತುಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ .
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ನಟಿ ಆರಾಧನಾ ರಾಮ್, ಕುಮಾರ್ ಗೋವಿಂದ್, ವಿನೋದ್ ಆಳ್ವ, ಶೃತಿ, ಬಿರಾದಾರ್, ಜಗಪತಿ ಬಾಬು, ಅತ್ಯುತ್ ಕುಮಾರ್, ಅವಿನಾಶ್, ಪದ್ಮಾವಸಂತಿ ಹೀಗೆ ಬಹುದೊಡ್ಡ ತಾರಾಗಣವಿದೆ.
ಈ ಹಿಂದೆ ತರುಣ್ ಸುಧೀರ್ ಹಾಗೂ ದರ್ಶನ್ ಕಾಂಬಿನೇಷನ್ನಲ್ಲಿ ರಾಬರ್ಟ್ ಸಿನಿಮಾ ಯಶಸ್ಸು ಕಂಡಿತ್ತು. ಈ ಬಾರಿ ನಮ್ಮ ನೆಲದ ಸೊಗಡಿನ ಕಥೆಯನ್ನು ಮುಂದಿಟ್ಟುಕೊಂಡು ದರ್ಶನ್ ಅವರನ್ನು ವಿಭಿನ್ನವಾಗಿ ತೋರಿಸಲಾಗಿದೆ. ಡಿಸೆಂಬರ್ 29ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಜನ ಬೆಳ್ಳಿತೆರೆಯ ಮೇಲೆ ನೋಡಲು ಕಾಯುತ್ತಿದ್ದಾರೆ.