“ಧೈರ್ಯಂ ಸರ್ವತ್ರ ಸಾಧನಂ” ಇದು ಎ ಆರ್ ಸಾಯಿ ರಾಮ್ ರವರ ಚೊಚ್ಚಲ ನಿರ್ದೇಶನದ ಚಿತ್ರ. ಎರಡು ವಾರಗಳ ಹಿಂದಷ್ಟೇ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿ 11 ಲಕ್ಷಕ್ಕೂ ಹೆಚ್ಚು ವೀವ್ಸ್ ಗಳನ್ನು ಪಡೆದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇತ್ತೀಚಿನ ದಿನಗಳಲ್ಲಿ ಹೊಸಬರ ಚಿತ್ರಗಳನ್ನು ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ನೋಡಿ ಪ್ರೋತ್ಸಾಹಿಸುತ್ತಿರುವ ಸಂದರ್ಭದಲ್ಲಿ, ವಿಭಿನ್ನವಾದ ಶೀರ್ಷಿಕೆಯೊಂದಿಗೆ “ಧೈರ್ಯಂ ಸರ್ವತ್ರ ಸಾಧನಂ” ತಂಡ ಪ್ರೇಕ್ಷಕರೆದುರಿಗೆ ಬರಲು ಸಿದ್ಧವಾಗಿದ್ದಾರೆ.
ಭಾರಿ ನಿರೀಕ್ಷೆ ಮೂಡಿಸಿರುವ ಈ ಚಿತ್ರದ ಟ್ರೈಲರ್ ನಲ್ಲಿ ಪ್ರತೀ ದೃಶ್ಯ ಹೊಸತನ ಮತ್ತು ನೈಜತೆಯಿಂದ ಮೂಡಿ ಬಂದಿದೆ. ಇದು ಶೋಷಿತ ವರ್ಗದ ಧ್ವನಿಯಾದಂತಿದೆ. ಬಂದೂಕನ್ನು ಕೂಡ ಒಂದು ಪಾತ್ರದಂತೆ ತೋರಿಸಲಾಗಿದೆ. ಒಟ್ಟಾರೆಯಾಗಿ ಟ್ರೈಲರ್ ನಲ್ಲಿ ಇಡೀ ತಂಡದ ಪರಿಶ್ರಮ ಎದ್ದು ಕಾಣುತ್ತದೆ.
ಸತ್ಯ ಘಟನೆ ಆಧರಿಸಿದ ಚಿತ್ರ :-
‘ಇದೊಂದು ಸತ್ಯ ಘಟನೆ ಆಧಾರಿತ ಸಿನಿಮಾ ವಾಗಿದ್ದು ಘಟನೆ ನಡೆದ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗಿದೆ ಮತ್ತು ನಾಯಕನ ಪಾತ್ರ ಬದುಕಿದ್ದು ಸಿನಿಮಾ ನೋಡಲು ಅವರು ಬರುತ್ತಾರೆ. ಇದು ಯಾರ ಕಥೆ ಮತ್ತು ಎಲ್ಲಿ ನಡೆದಿದ್ದು ಎಂಬುದನ್ನು ಸಿನಿಮಾದ ಕೊನೆಯಲ್ಲಿ ತೋರಿಸಲಾಗುತ್ತದೆ. ಆ ವ್ಯಕ್ತಿಗಳ ವಿವರ ಮತ್ತು ಭಾವಚಿತ್ರಗಳು ತೆರೆಯ ಮೇಲೆ ಕಾಣಿಸಿಕೊಳ್ಳುತ್ತವೆ’ ಎಂದು ನಿರ್ದೇಶಕ ಸಾಯಿ ರಾಮ್ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಹೇಳಿದ್ದರು.
ಈ ಸಿನಿಮಾದಲ್ಲಿ ನಾಯಕ ನಟನಾಗಿ ವಿವಾನ್ ಕೆಕೆ ನಟಿಸಿದ್ದು ನಾಯಕಿಯಾಗಿ ಅನುಷಾ ರೈ ನಟಿಸಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಯಶ್ ಶೆಟ್ಟಿ, ಬಾಲರಾಜ್ ವಾಡಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಹಿರೇಗೋಣಿಗೆರೆ , ರಾಮ್ ಪವನ್, ಚಕ್ರವರ್ತಿ ಚಂದ್ರಚೂಡ್, ವರ್ಧನ್, ಪದ್ಮಿನಿ ಶೆಟ್ಟಿ, ಪ್ರದೀಪ್ ಪೂಜಾರಿ, ಅರ್ಜುನ್ ಪಾಳೇಗಾರ ಮುಂತಾದವರು ನಟಿಸಿದ್ದಾರೆ.
ಕಥೆ-ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಸಾಯಿ ರಾಮ್ ರವರು ನಿಭಾಯಿಸಿದ್ದು ಜ್ಯೂಡಾ ಸ್ಯಾಂಡಿ ರವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿಕುಮಾರ್ ಸನಾ ರವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶ್ರೀಕಾಂತ್ ಗೌಡ ರವರ ಸಂಕಲನವಿದೆ.
ಎ ಪಿ ಪ್ರೊಡಕ್ಷನ್ ಬ್ಯಾನರ್ ನಡಿಯಲ್ಲಿ ಆನಂದ್ ಬಾಬು ಜಿ ರವರು ನಿರ್ಮಿಸಿರುವ “ಧೈರ್ಯಂ ಸರ್ವತ್ರ ಸಾಧನಂ” ಇದೇ ಫೆಬ್ರವರಿ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.