ಅನೀಶ್ ತೇಜೇಶ್ವರ್ ಗೆ ಬರ್ತಡೆ ಗಿಫ್ಟ್ ನೀಡಿರುವ “ಆರಾಮ್ ಅರವಿಂದ ಸ್ವಾಮಿ”ಸ್ಯಾಂಡಲ್ ವುಡ್ ನ ಭರವಸೆಯ ನಟ ಅನೀಶ್ ತೇಜೇಶ್ವರ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. “ಪೊಲೀಸ್ ಕ್ವಾಟ್ರಸ್”, “ಅಕಿರ”, “ವಾಸು ನಾನ್ ಪಕ್ಕಾ ಕಮರ್ಷಿಯಲ್”, “ರಾಮಾರ್ಜುನ” ಚಿತ್ರಗಳ ಮೂಲಕ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿರುವ ಅನಿಶ್ ರವರಿಗೆ ತಮ್ಮ ಮುಂಬರುವ ಚಿತ್ರ “ಆರಾಮ್ ಅರವಿಂದ ಸ್ವಾಮಿ” ಚಿತ್ರತಂಡದಿಂದ ಬರ್ತಡೆ ಗಿಫ್ಟ್ ದೊರಕಿದೆ.

ಅನೀಶ್ ರವರ ಜನ್ಮದಿನದಂದು ಚಿತ್ರತಂಡ ಹಾಡೊಂದನ್ನು ಬಿಡುಗಡೆ ಮಾಡಿದೆ. “ಆರಾಮ್ ಅರವಿಂದ ಸ್ವಾಮಿ” ಎಂಬ ಟೈಟಲ್ ಟ್ರ್ಯಾಕ್ ಅನ್ನು ತಂಡ ಬಿಡುಗಡೆ ಮಾಡಿದೆ. ನಿಶಾನ್ ರೈ ಹಾಡಿರುವ ಈ ಹಾಡಿಗೆ ಅನೀಶ್ ರವರು ಸಕ್ಕತ್ತಾಗಿ ಸ್ಟೆಪ್ ಹಾಕಿದ್ದಾರೆ. ಕಲರ್ ಫುಲ್ ಆಗಿ ಮೂಡಿ ಬಂದಿರುವ ಈ ಹಾಡಿಗೆ ಅನೀಶ್ ಜೊತೆ ಹಲವಾರು ನೃತ್ಯಗಾರರನ್ನು ಬಳಸಿಕೊಳ್ಳಲಾಗಿದೆ. ಬಾಬಾ ಭಾಸ್ಕರ್ ರವರ ಕೊರಿಯೋಗ್ರಾಫಿ ಇರುವ ಈ ಹಾಡನ್ನು ಅರ್ಜುನ್ ಜನ್ಯ ಕಂಪೋಸ್ ಮಾಡಿದ್ದಾರೆ. ನಾಗಾರ್ಜುನ ಶರ್ಮಾ ಬರೆದಿರುವ ಈ ಹಾಡನ್ನು ವಿಂಕ್ ವಿಷಲ್ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಹಿಂದೆ ನಮ್ಮ ಗಣಿ ಬಿಕಾಂ ಪಾಸ್, ಗಜಾನನ ಅಂಡ್ ಗ್ಯಾಂಗ್ ಚಿತ್ರಗಳನ್ನು ನಿರ್ದೇಶಿಸಿ ಭರವಸೆ ಮೂಡಿಸಿದ್ದ ಅಭಿಷೇಕ್ ಶೆಟ್ಟಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಭಿಷೇಕ್ ನಿರ್ದೇಶನದ ಮೂರನೇ ಚಿತ್ರ ಇದಾಗಿದ್ದು, ಅಭಿಷೇಕ್ ಮತ್ತು ಅನಿಶ್ ರವರ ಕಾಂಬಿನೇಷನ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಅನೀಶ್ ತೇಜೇಶ್ವರ್ ಗೆ ಜೋಡಿಯಾಗಿ ಮಿಲನ ನಾಗರಾಜ್ ಹಾಗೂ ಹೃತಿಕಾ ಶ್ರೀನಿವಾಸ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ವೈವಿಬಿ ಶಿವಸಾಗರ್ ಛಾಯಾಗ್ರಹಣವಿದ್ದು, ಉಮೇಶ್ ಆರ್ ಬಿ ರವರ ಸಂಕಲನವಿದೆ. “ಗುಳ್ಟು” ಸಿನಿಮಾ ಖ್ಯಾತಿಯ ಪ್ರಶಾಂತ ರೆಡ್ಡಿ ಎಸ್ ಹಾಗೂ “ಅಕಿರ” ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

Leave a comment