ಕನ್ನಡದ ಲೀಡಿಂಗ್ ಕಾಮಿಡಿ ಸ್ಟಾರ್ ಚಿಕ್ಕಣ್ಣ ರವರು ಇದೇ ಮೊದಲ ಬಾರಿಗೆ ಪರಿಪೂರ್ಣ ನಾಯಕನಟರಾಗಿ ನಟಿಸಿರುವ ಬಹುನಿರೀಕ್ಷಿತ “ಉಪಾಧ್ಯಕ್ಷ” ಚಿತ್ರದ ಟ್ರೈಲರ್ ಇದೇ ಜನವರಿ 13 2024ರಂದು ಬಿಡುಗಡೆಯಾಗುತ್ತಿದೆ
ಈ ಹಿಂದೆ ನಂದ ಕಿಶೋರ್ ನಿರ್ದೇಶನದ ಅಧ್ಯಕ್ಷ ಚಿತ್ರದಲ್ಲಿ ಶರಣ್ ಅವರೊಂದಿಗೆ ಮುಖ್ಯ ಪಾತ್ರದಲ್ಲಿ ಚಿಕ್ಕಣ್ಣ ನಟಿಸಿದ್ದರು. ಅಧ್ಯಕ್ಷ ಚಿತ್ರವು 2014ರಲ್ಲಿ ಸೂಪರ್ ಹಿಟ್ ಆಗಿತ್ತು. ಶರಣ್, ರವಿಶಂಕರ್ ಹಾಗೂ ಚಿಕ್ಕಣ್ಣ ರವರ ಕಾಂಬಿನೇಷನ್ ಚಿತ್ರ ಯಶಸ್ವಿಯಾಗುವುದರಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅದರ ಮುಂದುವರಿದ ಭಾಗದಂತೆ ಉಪಾಧ್ಯಕ್ಷ ಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ. ಈ ಬಾರಿ ಚಿಕ್ಕಣ್ಣ ರವರು ನಾಯಕ ನಟರಾಗಿ ಬಡ್ತಿ ಪಡೆದಿದ್ದಾರೆ.
ಉಪಾಧ್ಯಕ್ಷ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನವರಿ 13ರ ಸಂಜೆ 6:30ರಂದು ಟ್ರೇಲರ್ ರಿಲೀಸ್ ಮಾಡಲು ಚಿತ್ರತಂಡ ಸಿದ್ದಗೊಂಡಿದೆ. ಉಪಾಧ್ಯಕ್ಷ ಚಿತ್ರದ ಟ್ರೈಲರ್ ಅನ್ನು ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ರವರು ಬಿಡುಗಡೆ ಮಾಡಲಿದ್ದಾರೆ. ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಅನಿಲ್ ಕುಮಾರ್ ರವರ ನಿರ್ದೇಶನದ ಉಪಾಧ್ಯಕ್ಷ ಚಿತ್ರಕ್ಕೆ ಶೇಖರ್ ಚಂದ್ರ ರವರ ಛಾಯಾಗ್ರಹಣವಿದೆ .ಅರ್ಜುನ್ ಜನ್ಯ ರವರ ಸಂಗೀತವಿರುವ ಈ ಚಿತ್ರದ “ನನಗೆ ನೀನು” ಹಾಗು “ಉಪಾಧ್ಯಕ್ಷ ಟೈಟಲ್ ಟ್ರ್ಯಾಕ್” ಕೇಳುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಸ್ಮಿತಾ ಉಮಾಪತಿ ರವರು ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಮುಖ್ಯ ಭೂಮಿಕೆಯಲ್ಲಿ ಚಿಕ್ಕಣ್ಣ, ಮಲೈಕ, ರವಿಶಂಕರ್, ಸಾಧು ಕೋಕಿಲ, ಧರ್ಮಣ್ಣ ಕಡೂರ್ ನಟಿಸಿದ್ದಾರೆ. ಚಿಕ್ಕಣ್ಣ ಹಾಗೂ ರವಿಶಂಕರ್ ಅವರ ನಟನೆ ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ . ಇದೇ ಜನವರಿ 26 2024ರಂದು ಚಿತ್ರ ರಾಜ್ಯದ್ಯಂತ ಬಿಡುಗಡೆಯಾಗುತ್ತಿದೆ.