ಶಿವಣ್ಣರನ್ನು ನೋಡಿ ನನ್ನ ಮಕ್ಕಳು ಕಲಿಯಬೇಕು – ಧನುಷ್

ಶಿವಣ್ಣರನ್ನು ನೋಡಿ ನನ್ನ ಮಕ್ಕಳು ಕಲಿಯಬೇಕು – ಧನುಷ್

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಧನುಷ್ ಅಭಿನಯದ, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿರುವ ಆಕ್ಷನ್ ಅಡ್ವೆಂಚರ್ ತಮಿಳ್ ಚಿತ್ರ ಕ್ಯಾಪ್ಟನ್ ಮಿಲ್ಲರ್ ಜನವರಿ 12ನೇ ತಾರೀಖಿನಂದು ದೇಶಾದ್ಯಂತ ಬಿಡುಗಡೆಯಾಗಲಿದೆ.

ಇದೇ ಮೊದಲ ಬಾರಿಗೆ ಧನುಷ್ ಹಾಗೂ ಶಿವಣ್ಣ ಒಟ್ಟಿಗೆ ನಟಿಸುತ್ತಿದ್ದಾರೆ. ಇವರಿಬ್ಬರ ನಟನೆಯನ್ನು ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಹಿಂದೆ ಶಿವರಾಜ್ ಕುಮಾರ್ ಮೊದಲ ಬಾರಿಗೆ ರಜನಿಕಾಂತ್ ಜೊತೆ ನಟಿಸಿದ್ದ ತಮಿಳಿನ ಜೈಲರ್ ಚಿತ್ರ ಭಾರಿ ಯಶಸ್ಸು ಕಂಡಿತ್ತು. ಚಿಕ್ಕ ಪಾತ್ರವಾದರೂ ಶಿವಣ್ಣನ ನಟನೆಗೆ ತಮಿಳುನಾಡಿನ ಜನ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೈಲರ್ ಸಿನಿಮಾ ಶಿವಣ್ಣನಿಗೆ ತಮಿಳುನಾಡಿನಲ್ಲಿ ಭಾರಿ ಅಭಿಮಾನಿಗಳನ್ನು ಹುಟ್ಟು ಹಾಕಿತ್ತು. ಈಗ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಧನುಷ್ ಜೊತೆಗೂಡಿ ಕಮಾಲ್ ಮಾಡಲು ಹೊರಟಿದ್ದಾರೆ.

ಇತ್ತೀಚೆಗೆ ನಡೆದ ಕ್ಯಾಪ್ಟನ್ ಮಿಲ್ಲರ್ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಧನುಷ್ ಶಿವಣ್ಣರನ್ನು ಹಾಡಿ ಹೊಗಳಿದ್ದಾರೆ. ವೇದಿಕೆಯಲ್ಲಿ ಶಿವಣ್ಣನ ಕುರಿತು ಮಾತನಾಡಿದ ಅವರು “ನೀವು ಜೈಲರ್ ಸಿನೆಮಾದ ಕ್ಲೈಮ್ಯಾಕ್ಸ್ ನಲ್ಲಿ ನಡೆದು ಬಂದಿರುವ ರೀತಿ ಅದ್ಭುತ, ಆ ಸಿನಿಮಾ ಮೂಲಕ ನೀವು ತಮಿಳು ಪ್ರೇಕ್ಷಕರ ಎದೆಯೊಳಗೆ ಬಂದುಬಿಟ್ಟಿದ್ದೀರಿ, ನಿಮ್ಮ ನಗುವಿನಲ್ಲಿ ನಿಮ್ಮ ತಂದೆ ಡಾಕ್ಟರ್ ರಾಜಕುಮಾರ್ ಹಾಗೂ ನಿಮ್ಮ ತಮ್ಮ ಪುನೀತ್ ರಾಜಕುಮಾರ್ ಕಾಣುತ್ತಾರೆ, ತಂದೆಯ ಹೆಸರನ್ನು ಹೇಗೆ ಕಾಪಾಡಬೇಕು ಎಂಬುದಕ್ಕೆ ನೀವೇ ಉದಾಹರಣೆ, ಈ ಕಾರ್ಯಕ್ರಮಕ್ಕೆ ನನ್ನ ಮಕ್ಕಳೂ ಸಹ ಬಂದಿದ್ದಾರೆ, ನಿಮ್ಮನ್ನು ನೋಡಿ ಅವರು ಕಲಿತುಕೊಳ್ಳಲಿ ಎಂಬುದು ನನ್ನ ಬಯಕೆ” ಎಂದಿದ್ದಾರೆ

ಇನ್ನು ಕ್ಯಾಪ್ಟನ್ ಮಿಲ್ಲರ್ ಚಿತ್ರ ಐದು ಭಾಷೆಯಲ್ಲಿ ತೆರೆಗೆ ಬರಲಿದೆ. ಈ ಚಿತ್ರಕ್ಕೆ ಅರುಣ್ ಮಾತೇಶ್ವರನ ಅವರ ನಿರ್ದೇಶನವಿದ್ದು ಸತ್ಯ ಜ್ಯೋತಿ ಫಿಲಂಸ್ ಮೂಲಕ ನಿರ್ಮಾಣಗೊಂಡಿದೆ, ಇದಕ್ಕೆ ಸಿದ್ದಾರ್ಥ ನುನಿ ಅವರ ಛಾಯಾಗ್ರಹಣವಿದ್ದು, ಜಿ ವಿ ಪ್ರಕಾಶ್ ಕುಮಾರ್ ಅವರ ಸಂಗೀತವಿದೆ. ಕೊರನಾರು ಹಾಡಿಗೆ ಧನುಷ್ ಹಾಗೂ ಶಿವಣ್ಣ ಒಟ್ಟಿಗೆ ಹೆಜ್ಜೆ ಹಾಕಿದ್ದು ಈ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ.ಚಿತ್ರದಲ್ಲಿ ಧನುಷ್, ಶಿವರಾಜ್ ಕುಮಾರ್, ಪ್ರಿಯಾಂಕ ಅರುಲ್ ಮೋಹನ್, ಅದಿತಿ ಬಾಲನ್, ಸಂದೀಪ್ ಕಿಶನ್ ಹೀಗೆ ಬಹುದೊಡ್ಡ ತಾರಾಂಗಣವಿದೆ. ಸಂಕ್ರಾಂತಿ ಹಬ್ಬಕ್ಕೆ ಕನ್ನಡಿಗರಿಗೆ ಹಾಗೂ ಪೊಂಗಲ್ ಹಬ್ಬಕ್ಕೆ ತಮಿಳಿಗರಿಗೆ ಈ ಚಿತ್ರ ಭರಪೂರ ಮನರಂಜನೆಯನ್ನು ಒದಗಿಸಲಿದೆ.

Leave a comment