ಹೊಸ ಪ್ರಯೋಗಕ್ಕೆ ಬೇಕಿದೆ ಪ್ರೋತ್ಸಾಹ: ಫೆಬ್ರುವರಿ 9ಕ್ಕೆ ಪೃಥ್ವಿ ಅಂಬರ್ ನಟನೆಯ “ಜೂನಿ” ಬಿಡುಗಡೆ.

ಒಂದು ಉತ್ತಮವಾದ ಚಿತ್ರಕ್ಕೆ ಇಂತಹುದೇ ಆದ ಯಾವುದೇ ರೆಗ್ಯುಲರ್ ಫಾರ್ಮುಲಾ, ಚೌಕಟ್ಟು ಹಾಗೂ ಸಿದ್ದಸೂತ್ರಗಳೆಂದು ಇರುವುದಿಲ್ಲ. ಚಿತ್ರಕಥೆಯ ವಿಚಾರದಲ್ಲಿ ವಿಭಿನ್ನ ಪ್ರಯತ್ನಗಳನ್ನು ಮಾಡಿದಾಗಲೇ ಪ್ರೇಕ್ಷಕರಿಗೆ ಹೊಸದೊಂದು ಅನುಭವವನ್ನು ಕೊಡಲು ಸಾಧ್ಯ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಚಿತ್ರ “ಜೂನಿ”.

ಕಳೆದ ವಾರ “ಜೂನಿ” ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತೀಚಿನ ದಿವಸಗಳಲ್ಲಿ ಒಂದೇ ತರನಾದ ಸಿನಿಮಾವನ್ನು ವೀಕ್ಷಿಸುತ್ತಿದ್ದ ಪ್ರೇಕ್ಷಕರಿಗೆ ಹೊಸಬರ ತಂಡ ಹೊಸದೊಂದು ಪ್ರಯೋಗದೊಂದಿಗೆ ಇದೇ ಫೆಬ್ರವರಿ 9ರಂದು ತೆರೆಗೆ ಬರಲಿದ್ದಾರೆ.

“ದಿಯಾ” ಚಿತ್ರದ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದ ಪೃಥ್ವಿ ಅಂಬರ್ ಈ ಚಿತ್ರದ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರು ಒಬ್ಬ ಚೆಫ್ ಪಾತ್ರದಲ್ಲಿ ನಟಿಸಿದ್ದಾರೆ. ಒಬ್ಬ ನಟನಾದವನಿಗೆ ವಿಭಿನ್ನ ಪಾತ್ರಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದು ಉತ್ತಮವಾದ ಬೆಳವಣಿಗೆ. ಅದೇ ರೀತಿ ಪೃಥ್ವಿ ಅಂಬರ್ ಕೂಡ ವಿಭಿನ್ನವಾದ ಪಾತ್ರಗಳು ಹಾಗೂ ಕಥೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವುದು ಪ್ರಶಂಸನೀಯ.

ಚಿತ್ರಕಥೆ ಮತ್ತು ನಿರ್ದೇಶನ ಮಾಡಿರುವ ವೈಭವ್ ಮಹಾದೇವ್ ರವರು ಪ್ರೇಮ ಕಥೆಯೊಂದಿಗೆ ಸೈಕಾಲಜಿಕಲ್ ತ್ರಿಲ್ಲರ್ ಅನ್ನು ಸೇರಿಸಿ ಟ್ರೈಲರ್ ನನ್ನು ಎಂಗೇಜಿಂಗ್ ಆಗಿಸಿದ್ದಾರೆ. ಚಿತ್ರದಲ್ಲೂ ಕೂಡ ನಾವು ಇದನ್ನು ನಿರೀಕ್ಷಿಸಬಹುದು. ಜಿತಿನ್ ದಾಸ್ ರವರ ಛಾಯಾಗ್ರಹಣ ನೋಡುಗರ ಗಮನ ಸೆಳೆಯುತ್ತದೆ. ನಕುಲ್ ಅಭಯಂಕರ್ ಅವರು ಸಂಗೀತ ನೀಡಿರುವ ಈ ಚಿತ್ರಕ್ಕೆ ಶಶಾಂಕ್ ನಾರಾಯಣ್ ರವರು ಸಂಕಲನ ಮಾಡಿದ್ದಾರೆ.

ಪೃಥ್ವಿ ಅಂಬರ್, ರಿಷಿಕಾ ನಾಯಕ್, ಸುಧಾರಾಣಿ, ಅವಿನಾಶ್, ವಿನಯ ಪ್ರಸಾದ್, ಧನುಷ್ ರವೀಂದ್ರ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ತ್ರಿಶೂಲ್ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಮೋಹನ್ ಕುಮಾರ್ ಎಸ್ ನಿರ್ಮಾಣದ ಜೂನಿ ಚಿತ್ರ ಇದೇ ಫೆಬ್ರವರಿ 9ರಂದು ರಾಜ್ಯದ್ಯಂತ ಬಿಡುಗಡೆಯಾಗಲಿದೆ. ಬೇರೆ ಭಾಷೆಯ ಪ್ರಯೋಗಗಳನ್ನು ನೋಡಿ ನಮ್ಮಲ್ಲಿ ಈ ತರಹದ ಚಿತ್ರ ಬರುತ್ತಿಲ್ಲ ಎನ್ನುವವರು “ಜೂನಿ” ಚಿತ್ರವನ್ನು ನೋಡಿ ಹಾರೈಸಬೇಕಿದೆ.

Leave a comment