ವಿನಯ್ ರಾಜಕುಮಾರ್ ರವರ “ಒಂದು ಸರಳ ಪ್ರೇಮಕಥೆ”

ಸಿಂಪಲ್ ಸುನಿ ಹೊಸತನಕ್ಕೆ ಪ್ರೇಕ್ಷಕರು ಫಿದಾ

ಒಂದು ಸರಳ ಪ್ರೇಮಕಥೆ ಇದು ಸಿಂಪಲ್ ಸುನಿ ಹಾಗೂ ವಿನಯ್ ರಾಜಕುಮಾರ್ ರವರ ಮೊದಲ ಕಾಂಬಿನೇಷನ್ ಚಿತ್ರ. ಈ ಚಿತ್ರದ ಎರಡು ಟೀಸರ್ ಗಳು ರಿಲೀಸ್ ಆಗಿದ್ದು ಒಂದು ಟೀಸರ್ ವಿನಯ್ ರಾಜಕುಮಾರ್ ರವರ “ಅತಿಶಯ್” ಎಂಬ ಕ್ಯಾರೆಕ್ಟರ್ ಅನ್ನು ಪರಿಚಯಿಸಿದರೆ ಮತ್ತೊಂದು ಟೀಸರ್ ನಾಯಕಿ ಸ್ವಾತಿಷ್ಠರವರ “ಅನುರಾಗ” ಎಂಬ ಕ್ಯಾರೆಕ್ಟರನ್ನು ಪರಿಚಯಿಸುತ್ತದೆ.

ಸಿದ್ದಾರ್ಥ ಚಿತ್ರದ ಮೂಲಕ ನಾಯಕನಟನಾಗಿ ಸಿನಿ ಪಯಣ ಶುರು ಮಾಡಿದ್ದ ವಿನಯರಾಜಕುಮಾರ್ ಇತ್ತೀಚೆಗೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. “ಅಂದೊಂದಿತ್ತು ಕಾಲ”, “ಪೇಪೆ” “ಗ್ರಾಮಾಯಣ” ಚಿತ್ರಗಳ ನಂತರ ಸಿಂಪಲ್ ಸುನಿ ಜೊತೆಗೆ ಕೈಜೋಡಿಸಿದ್ದು “ಒಂದು ಸರಳ ಪ್ರೇಮ ಕಥೆ”ಯಾಗಿ ಹೊರಬರುತ್ತಿದೆ.

ಈ ಚಿತ್ರದಲ್ಲಿ ನಾಯಕಿಯರಾಗಿ ಸ್ವಾತಿಷ್ಠ ಕೃಷ್ಣನ್ ಮತ್ತು “ರಾಧಾಕೃಷ್ಣ” ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ನಟಿಸಿದ್ದಾರೆ. ರಾಧಾಕೃಷ್ಣ ಧಾರವಾಹಿ ಮೂಲಕ ಖ್ಯಾತಿ ಗಳಿಸಿದ ಮಲ್ಲಿಕಾ ಸಿಂಗ್ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದು ಕಿರುತೆರೆಯಲ್ಲಿ ರಾಧೆಯಾಗಿ ಅವರ ನಟನೆಯನ್ನು ನೋಡಿ ಮೆಚ್ಚಿದ್ದ ಪ್ರೇಕ್ಷಕರು ವಿನಯ್ ರಾಜಕುಮಾರ್ ಹಾಗೂ ಮಲ್ಲಿಕಾ ಸಿಂಗ್ ರವರ ನಟನೆಯನ್ನು ನೋಡಲು ಕಾಯುತ್ತಿದ್ದಾರೆ.

ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಜನಪ್ರಿಯರಾಗಿರುವ ನಿರ್ದೇಶಕ ಸುನಿ ರವರು ಹಲವಾರು ಪ್ರೇಮ ಕಥೆಗಳನ್ನು ತಮ್ಮದೇ ನಿರೂಪಣಾ ಶೈಲಿ ಮತ್ತು ನಿರ್ದೇಶನದಿಂದ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಈಗ “ಒಂದು ಸರಳ ಪ್ರೇಮ ಕಥೆಯ” ಮೂಲಕ ಪ್ರೇಕ್ಷಕರೆದರು ಬರುತ್ತಿದ್ದಾರೆ. ಆದರೆ ಇದು, ಒಂದು ವಿರಳ ಅಲ್ಲ ಸರಳ ಪ್ರೇಮಕಥೆ ಎಂಬುದನ್ನು ತಮ್ಮ ಪೋಸ್ಟರ್ ಮೂಲಕ ಹೇಳಿದ್ದಾರೆ. ಈ ಹಿಂದೆ ಸುನಿ ನಿರ್ದೇಶನದ ಚಮಕ್, ಬಜಾರ್, ಸಖತ್, ಅವತಾರ ಪುರುಷ ಚಿತ್ರಗಳು ಯಶಸ್ವಿಯಾಗಿದ್ದರಿಂದ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ವೀರ್ ಸಮರ್ಥ್ ಸಂಗೀತ ಸಂಯೋಜಿಸಿರುವ ಮೂರು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು ಅದರಲ್ಲಿ “ಗುನುಗುನುಗು” ಎಂಬ ಹಾಡನ್ನು ನಟ ಗೋಲ್ಡನ್ ಸ್ಟಾರ್ ಗಣೇಶ್ ರವರು ಬಿಡುಗಡೆ ಮಾಡಿ ಶುಭಕೋರಿದ್ದರು. ಈಗಾಗಲೇ ಮೂರೂ ಹಾಡುಗಳು ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿವೆ.

ಚಿತ್ರದಲ್ಲಿ ವಿನಯ್ ರಾಜಕುಮಾರ್, ಸ್ವಾತಿಷ್ಠ ಕೃಷ್ಣನ್, ಮಲ್ಲಿಕಾ ಸಿಂಗ್, ರಾಜೇಶ್ ನಟರಂಗ, ಸಾಧು ಕೋಕಿಲ, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದಾರೆ.

ಸಿಂಪಲ್ ಸುನಿಲ್ ನಿರ್ದೇಶನದ ಈ ಚಿತ್ರಕ್ಕೆ ವೀರ್ ಸಮರ್ಥ್ ರವರ ಸಂಗೀತವಿದೆ. ಕಾರ್ತಿಕ್ ಶರ್ಮಾ ಹಾಗೂ ಸಭಾ ಕುಮಾರ್ ರವರ ಛಾಯಾಗ್ರಹಣವಿದ್ದು, ಆಧಿ ಕೃಷ್ಣ ರವರ ಸಂಕಲನವಿದೆ.

ರಾಮ್ ಮೂವೀಸ್ ಬ್ಯಾನರ್ ನಲ್ಲಿ ಮೈಸೂರು ರಮೇಶ್ ರವರು ನಿರ್ಮಿಸಿರುವ ಈ ಚಿತ್ರ ಇದೇ ಫೆಬ್ರವರಿ 8ನೇ ತಾರೀಖು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಟೀಸರ್ ನಲ್ಲೆ ಹೊಸತನದ ಅನುಭವವನ್ನು ಕೊಟ್ಟ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆ ಇದೆ.

Leave a comment