“ಶಾಖಾಹಾರಿ”, ಇದೊಂದು ಕತ್ತಲು ಬೆಳಕಿನ ಆಟದಂತೆ, ರಕ್ತ ಸಿಕ್ತ ಅಧ್ಯಾಯದಂತೆ, ಮುಗ್ಧತೆ ಹಿಂದಿನ ಮುಖವಾಡದಂತೆ. ಹೀಗೆ ಹಲವು ಕೋನಗಳಲ್ಲಿ ಯೋಚಿಸುವಂತೆ ಮಾಡಿದ್ದು ಶಾಖಾಹಾರಿ ಚಿತ್ರದ ಟ್ರೈಲರ್.
ರಂಗಾಯಣ ರಘು ರವರು ಮುಖ್ಯ ಪಾತ್ರಧಾರಿಯಾಗಿ ನಟಿಸಿ ರುವ ಶಾಖಾಹಾರಿ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ನೋಡುಗರ ನಿರೀಕ್ಷೆಯನ್ನು ದುಪ್ಪಟ್ಟು ಗೊಳಿಸಿದೆ. ಮಲೆನಾಡಿನ ಸಣ್ಣ ಹಳ್ಳಿಯಲ್ಲಿ ಹೋಟೆಲ್ ನಡೆಸುವ ಸುಬ್ಬಣ್ಣ ಭಟ್ಟರ ಪಾತ್ರದಲ್ಲಿ ರಂಗಾಯಣ ರಘು ರವರು ಪರಕಾಯ ಪ್ರವೇಶ ಮಾಡಿದಂತಿದೆ. ಈ ಟೀಸರ್ ನಲ್ಲಿನ ಅವರ ನಟನೆ ಈವರೆಗಿನ ಅವರ ಸಿನಿಪಯಣದ ಅನುಭವವನ್ನು ಧಾರೆ ಏರೆದಂತಿದೆ. ಎಂತಹುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಟಿಸುವ ರಂಗಾಯಣ ರಘು ರವರಿಗೆ ಈ ಪಾತ್ರ ತಮ್ಮ ಇಷ್ಟು ವರ್ಷದ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲಾಗುವ ಎಲ್ಲಾ ಸಾಧ್ಯತೆಗಳು ಇವೆ.
ಗೋಪಾಲಕೃಷ್ಣ ದೇಶಪಾಂಡೆ ರವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,ಸುಜಯ್ ಶಾಸ್ತ್ರಿ, ಪ್ರಶಾಂತ್ ನಟನ ವಿನಯ್ ಯು ಜೆ, ನಿಧಿ ಹೆಗಡೆ, ಹರಿಣಿ, ಶಿಲ್ಪ ಶೈಲೇಶ್, ಪ್ರತಿಮಾ ನಾಯಕ್, ಶ್ರೀ ಹರ್ಷ ಗೋಭಟ್ ಹಾಗೂ ಮುಂತಾದ ಮಲೆನಾಡಿನ ಕಲಾವಿದರು ನಟಿಸಿದ್ದಾರೆ.
ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವ ಸಂದೀಪ್ ಸುಂಕದ್ ರವರು ವಿಭಿನ್ನ ಪ್ರಯತ್ನದ ಮೂಲಕ ಪ್ರೇಕ್ಷ ಕರೆದರೂ ಬರುತ್ತಿದ್ದಾರೆ. ಇದಕ್ಕೆ ಸಾತ್ ನೀಡಿರುವುದು ವಿಶ್ವಜಿತ್ ರಾವ್ ರವರ ಛಾಯಾಗ್ರಹಣ. ಪ್ರತಿ ಫ್ರೇಮ್ನಲ್ಲೂ ಪ್ರೇಕ್ಷಕರನ್ನು ಎಂಗೇಜ್ ಆಗಿ ಇಡುವಂತಹ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಶಶಾಂಕ್ ನಾರಾಯಣ್ ರವರ ಸಂಕಲನ ಈ ಚಿತ್ರಕ್ಕಿದೆ. ಆರ್ಟ್ ಡಿಪಾರ್ಟ್ಮೆಂಟ್ ನ ದೇವಿ ಪ್ರಕಾಶ್ ರವರ ಪರಿಶ್ರಮ ಎದ್ದು ಕಾಣುತ್ತದೆ. ಮಯೂರ್ ಅಂಬೆ ಕಲ್ಲು ರವರು ಸಂಗೀತದ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕ್ರೈಂ ಥ್ರಿಲ್ಲರ್ ಚಿತ್ರಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸುತ್ತಿದ್ದಾರೆ. ವಿಭಿನ್ನ ಕಥೆ ಚಿತ್ರಕಥೆ ಹಾಗೂ ಹೊಸತನದಿಂದ ಕೂಡಿರುವ ಶಾಖಾಹಾರಿ ಚಿತ್ರವನ್ನು ಪ್ರೇಕ್ಷಕರು ಬೆಂಬಲಿಸುತ್ತಾರೆ ಎಂಬುದು ಚಿತ್ರತಂಡದ ವಿಶ್ವಾಸ.
ರಾಜೇಶ್ ಕೀಳಂಬಿ ಹಾಗೂ ರಂಜಿನಿ ಪ್ರಸನ್ನ ರವರು ನಿರ್ಮಿಸಿರುವ “ಶಾಖಾಹಾರಿ” ಚಿತ್ರ ಇದೇ ಫೆಬ್ರುವರಿ 16 ರಂದು ಕರ್ನಾಟಕ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು ಚಿತ್ರ ಯಶಸ್ವಿಯಾಗಲೆಂದು “ಸಿನಿಮಾ ಸಂಚಾರ” ತಂಡ ಶುಭ ಹಾರೈಸುತ್ತದೆ.